ದ್ಯೌಃ 
ಇಂಡೋ ಯುರೋಪಿಯನ್ ದೇವತೆ. ಆಕಾಶಾಧಿಪತಿ ಅಥವಾ ಸ್ವರ್ಗಾಧಿಪತಿ. ಗ್ರೀಕರ ಜ್ಯೂಸ್ ದೇವತೆಗೆ ಸಮಾನವಾದ ಈ ದೇವತೆ ಆರ್ಯರೊಡನೆ ಭಾರತ ಪ್ರವೇಶ ಮಾಡಿತು.  ಆದರೆ ಹಿಂದೂಗಳು ಈ ದೇವತೆ ಆರ್ಯರೊಡನೆ ಭಾರತ ಪ್ರವೇಶ ಮಾಡಿತು.  ಆದರೆ ಹಿಂದುಗಳೂ ಈ ದೇವತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಿಲ್ಲ. ವೇದ, ಪುರಾಣಗಳಲ್ಲಿ ಈ ದೇವತೆಗೆ ಪ್ರಮುಖ ಸ್ಥಾನವಿಲ್ಲದಿದ್ದರೂ ಇದನ್ನು ಪೃಥಿವಿಯೊಡನೆ ದ್ಯಾವಾಪೃಥಿವೀ ದ್ಯಾವಾಕ್ಷಮಾ ಎಂದು ಅವಾಹನೆ ಮಾಡಿ ಯಜ್ಞದಲ್ಲಿ ಹವಿಸ್ಸನ್ನರ್ಪಿಸುತ್ತಾರೆ. 

	ಋಗ್ವೇದದಲ್ಲಿ ಅಂತರಿಕ್ಷ, ಆಕಾಶ ಎಂಬ ಅರ್ಥದಲ್ಲಿ ಈ ಶಬ್ಧ 500 ಕಡೆಯೂ ದಿವಸ ಹಗಲು ಎಂಬ ಅರ್ಥದಲ್ಲಿ 50 ಕಡೆಯು ಬಳಸಲ್ಪಟ್ಟಿದೆ.  ಆದರೆ ಆಕಾಶದೇವತೆ ಎಂಬರ್ಥದಲ್ಲಿ ಪ್ರತ್ಯೇಕವಾಗಿ ಈ ದೇವತೆಯನ್ನೇ ಅಧಿಕರಿಸಿದ ಸೂಕ್ತವೊಂದೂ ಇಲ್ಲ. ಪೃಥಿವೀದೇವತೆಯೊಡಗೂಡಿ ಅಂದರೆ ದ್ಯಾವಾಪೃಥಿವೀ ದೇವತಾದ್ವಂದ್ವವುಳ್ಳ ಆರು ಸೂಕ್ತಗಳಿವೆ. ಇವುಗಳಲ್ಲಿ ಕೆಲವು ಕಡೆ ದ್ಯೌಃ ಪುರುಷ, ಪೃಥಿವೀ ಸ್ತ್ರಿ, ಇವರಿಬ್ಬರೂ ಕೂಡಿ ಜಗತ್ತಿನ ತಂದೆ ತಾಯಿ ಎಂಬ ಸ್ಪಷ್ಟ ಉಕ್ತಿಗಳೂ ಇವೆ. ಆದರೆ ಸುಮಾರು 20ಕಡೆ ದ್ಯೌಃ ಶಬ್ದ ಸ್ತ್ರೀ ಲಿಂಗದಲ್ಲೇ ಇದ್ದು ತಂದೆ ತಾಯಿಗಳ ಪುಂ-ಸ್ತ್ರೀ ಲಿಂಗಭೇದಕ್ಕೆ ವೈದಿಕವಾಗಿ ಪ್ರಾಧಾನ್ಯವಿರಲಿಲ್ಲವೆಂಬ ಭಾವನೆಗೆ ಅವಕಾಶಮಾಡಿಕೊಡುತ್ತದೆಂಬುದು ಗಮನಾರ್ಹ.  ಉಷಸ್, ಅಶ್ವಿನೀ ದೇವತೆಗಳು, ಅಗ್ನಿ, ಪರ್ಜನ್ಯ, ಸೂರ್ಯ, ಆದಿತ್ಯರು, ಮರುತ್ತುಗಳು, ಅಂಗಿರಸರು-ಇವರು ದ್ಯೌಃ  ದೇವತೆಯ ಸಂತಾನಗಳೆಂದು ಅಲ್ಲಲ್ಲಿ ಉಕ್ತರಾಗಿದ್ದಾರೆ.  ದ್ಯುಲೋಕ, ಪೃಥಿವೀಲೋಕ ಎಂಬರ್ಥದಲ್ಲಿ ರೋದಸೀ ಎಂಬ ಪ್ರಯೋಗ 100 ಕಡೆಯಾದರೂ ಇದೆ.  ದ್ಯಾವಾಪೃಥಿವಿಗಳು ಎಂದೂ ಮುದಿಯಾಗದ ಗೂಳಿ ಮತ್ತು ಹಸೆ ಎಂದೂ ಹೇಳಲ್ಪಟ್ಟಿವೆ.  ಈ ಇಬ್ಬರು ದೇವತೆಗಳೂ ಅನ್ನ, ಐಶ್ವರ್ಯ, ಕೀರ್ತಿ ಮತ್ತು ಭೂಮಿಗಳನ್ನು ಅನುಗ್ರಹಿಸುವರು. ಇಬ್ಬರೂ ಪ್ರಾಜ್ಞರು ಮತ್ತು ಲೋಕಗಳನ್ನು ಪಾವನಗೊಳಿಸುವರು ; ಮಾತಾಪಿತೃಗಳಾಗಿ ಪ್ರಾಣಿಗಳೆಲ್ಲರನ್ನೂ ಸಲಹುತ್ತ ಅಪಯಶಸ್ಸು ಮತ್ತು ವಿಪತ್ತುಗಳಿಂದ ರಕ್ಷಿಸುವರು. 
(ಎಸ್.ಆರ್‍ಎಎನ್.; ಬಿ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ